ಸಪ್ರು, ತೇಜ್‍ಬಹದ್ದೂರ್
	1875-1949. ಸ್ವಾತಂತ್ರ್ಯ ಹೋರಾಟ ಗಾರರು. 1875 ಡಿಸೆಂಬರ್ 8ರಂದು ಜನಿಸಿದರು. ಆಗ್ರ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಹೆಸರಾಂತ ವಕೀಲರಾದರು. ದಿಲ್ಲಿಯಲ್ಲಿಯ ಸಂಸತ್ ಸಭೆಯ ಸದಸ್ಯರಾಗಿದ್ದರು (1916-20). 1921-23ರಲ್ಲಿ ವೈಸ್‍ರಾಯರ ಸಮಿತಿಯಲ್ಲಿ ಕಾನೂನಿನ ಸದಸ್ಯರೆಂದು ನೇಮಕಗೊಂಡರು. ಲಂಡನ್ನಿನಲ್ಲಿ ಸಾಮ್ರಾಜ್ಯ ಪರಿಷತ್ ಮತ್ತು ಎರಡು ದುಂಡುಮೇಜಿನ ಪರಿಷತ್‍ಗಳಲ್ಲಿ ಭಾಗವಹಿಸಿದ್ದರು. 

	ಇವರ ಮೇಧಾವಿತನ ಮತ್ತು ಜಾಣ್ಮೆ ಮೆಚ್ಚಿದ ಬ್ರಿಟಿಷರು ಇವರನ್ನು ಪಾರ್ಲಿಮೆಂಟಿನ ಸುಧಾರಣಾ ಸಮಿತಿಯ ಸದಸ್ಯರಾಗಿ ನೇಮಿಸಿದ್ದರು. 1931 ಮತ್ತು 1932ರಲ್ಲಿ ಜರುಗಿದ ಗಾಂಧೀ-ಇರ್ವಿನ್ ಕರಾರು ಮತ್ತು ಪುಣೆ ಕರಾರುಗಳಿಗೆ ಇವರೆ ಕಾರಣವೆಂದು ಹೇಳಲಾಗಿದೆ. ಗಾಂಧೀಜಿ ಪುಣೆ ಕಾರಾಗೃಹದಲ್ಲಿ  ಕೈಕೊಂಡ ಆಮರಣ ಉಪವಾಸ ಮುಕ್ತಾಯ ಗೊಳಿಸುವಂತೆ ಮಾಡಿದವರಲ್ಲಿ ಇವರು ಪ್ರಮುಖರು. ಸ್ವಾತಂತ್ರ್ಯ ಹೋರಾಟದಲ್ಲಿ ಇವರು ಮಿತವಾದಿ. ಐ.ಎನ್.ಎ. ಕೈದಿಗಳು ನಡೆಸಿದ ಹೋರಾಟವನ್ನು ಎತ್ತಿಹಿಡಿದು ನ್ಯಾಯಾಲಯದಲ್ಲಿ ವಾದಿಸಿದ ಕೀರ್ತಿ ಇವರದು. ಇವರು 1949 ಜನವರಿ 20ರಂದು ನಿಧನರಾದರು.   	
(ಡಿ.ಎನ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ